Telegram Join My Telegram WhatsApp Join My WhatsApp

7,8,9,10 ನೆಯ ತರಗತಿಗಳ “CBSE Grammar 2026- ಗದ್ಯಭಾಗ ಓದಿ ಉತ್ತರಿಸಿ ”

(ವಾಚನ ಮತ್ತು ಗ್ರಹಿಕಾ ಕೌಶಲ್ಯ) – 10 ಅಂಕಗಳು (Unseen passages)

1. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(1 × 5 = 5)

ಆ ಹುಡುಗ ಜನಿಸಿದ್ದು ಬಂಗಾಳದ ಕಟಕ್ ನಲ್ಲಿ ಜಾನಕಿನಾಥ ಬೋಸ್ ಹಾಗೂ ಪ್ರಭಾವತಿ ದೇವಿ ಅವರ ಒಂಬತ್ತನೆಯ ಪುತ್ರ. ಒಂದು ದಿನ ತಾಯಿ ಮಗನ ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು. ಅವನ ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿ ಚೂರುಗಳಿದ್ದವು. ಅವನ್ನು ಅಲ್ಲಿ ಮುಚ್ಚಿಡುವ ಅಗತ್ಯ ಏನಿತ್ತು? ಎಂದು ತಾಯಿ ಯೋಚಿಸಿದಳು. ಮಗ ಬಂದ ಮೇಲೆ ಕೇಳಿದರಾಯಿತು ಅಂದುಕೊಂಡಳು. ಶಾಲೆಯಿಂದ ಬಂದ ಮೇಲೆ ಮಗನನ್ನು ಕೇಳಿದಳು.

“ಮಗು, ನೀನು ರೊಟ್ಟಿ ಚೂರುಗಳನ್ನು ಕಪಾಟಿನಲ್ಲಿ ಏಕೆ ಮುಚ್ಚಿಟ್ಟಿದ್ದೆ?” ಎಂದು ಕೇಳಿದಳು. ಆಗ ಮಗ ಅಳುತ್ತಾ, “ಅಮ್ಮ ಇನ್ನು ಮುಂದೆ ಆ ರೊಟ್ಟಿ ಚೂರುಗಳ ಅಗತ್ಯವಿಲ್ಲ. ತೆಗೆದು ಎಸೆದು ಬಿಡು” ಎಂದು ಹೇಳಿದನು. ಮಗ ಅಳುತ್ತಿರುವುದನ್ನು ಕಂಡು ತಾಯಿಯ ಮನಸ್ಸು ಮರುಗಿತು.

“ಮಗು ಏಕೆ ಅಳುತ್ತಿರುವೆ?” ಎಂದು ಕೇಳಿದರು. ಆಗ ಮಗ, “ಅಮ್ಮ, ಪ್ರತಿದಿನ ನನ್ನ ಊಟದಿಂದ ರೊಟ್ಟಿ ತೆಗೆದಿಟ್ಟು ಒಬ್ಬ ಭಿಕ್ಷುಕಿಗೆ ಕೊಡುತ್ತಿದ್ದೆ. ಆದರೆ ಈ ಎರಡು ದಿನಗಳಿಂದ ಆ ಜಾಗದಲ್ಲಿ ಅವಳು ಕಾಣಿಸಲಿಲ್ಲ. ಇನ್ನು ಕಾಣಿಸುವ ಯಾವ ಲಕ್ಷಣವೂ ಇಲ್ಲ” ಎಂದು ಹೇಳುವಾಗ ಅವನ ಗಂಟಲು ಕಟ್ಟಿತು. ಮಗನ ಮಾತನ್ನು ಕೇಳಿದ ತಾಯಿಯ ಹೃದಯ ತುಂಬಿ ಬಂತು. ಬಡವರ ಕಷ್ಟಕ್ಕೆ ಸ್ಪಂದಿಸುವ ನಿನ್ನಂತಹ ಕರುಣಾಮಯಿ ಮಗನನ್ನು ಪಡೆದ ನಾನೇ ಧನ್ಯ ಎಂದುಕೊಂಡು ಸಂತೋಷಪಟ್ಟರು. “ಕೀರ್ತಿವಂತನಾಗಿ ಬಾಳು” ಎಂದು ಮನಸಾರೆ ಹರಸಿದರು.

ಅದೇ ಬಾಲಕ ಮುಂದೆ ಭಾರತದ ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸಿದರು. ಬ್ರಿಟಿಷರ ಕೈಯಲ್ಲಿ ಸಿಲುಕಿದ ಭಾರತ ಮಾತೆಯ ಪರಿಸ್ಥಿತಿಯನ್ನು ಕಂಡು ಅವರ ಹೃದಯ ಮರುಗಿತು. ಶತ್ರುವನ್ನು ಸದೆಬಡಿಯಲು ಕ್ರಾಂತಿಯ ಮಾರ್ಗವನ್ನು ಅನುಸರಿಸಿದರು. ಹೂವಿನಂತೆ ಮೃದುವಾದ ಅವರ ಮನಸ್ಸು ವಜ್ರದಂತೆ ಕಠಿಣವಾಗಬಲ್ಲದು ಎಂಬುದನ್ನು ಸಾಧಿಸಿ ತೋರಿಸಿದರು. ವಿದೇಶದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಸೈನ್ಯವನ್ನು ಕಟ್ಟಿದರು. ಅವರೇ ನಮ್ಮ ಧೀರನಾಯಕ ಸುಭಾಷ್ ಚಂದ್ರ ಬೋಸ್.

ಪ್ರಶ್ನೆಗಳು :

I. ಸುಭಾಷ್ ಚಂದ್ರ ಬೋಸ್ ಜನಿಸಿದ ಸ್ಥಳ
A. ಬಂಗಾಳದ ಕಟಕ್
B. ಬಿಹಾರ
C. ಮಹಾರಾಷ್ಟ್ರ
D. ಪಂಜಾಬ್

II. ಬಾಲಕ ರೊಟ್ಟಿಯನ್ನು __________ ಕೊಡುತ್ತಿದ್ದನು.
A. ಮಕ್ಕಳಿಗೆ
B. ವಯಸ್ಕರಿಗೆ
C. ಭಿಕ್ಷುಕಿಗೆ
D. ಕುಡುಕರಿಗೆ

III. ಸುಭಾಷ್ ಚಂದ್ರ ಬೋಸರು ವಿದೇಶದಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಸೈನ್ಯವನ್ನು ಕಟ್ಟಿದರು.
A. ಭಾರತದ
B. ರಷ್ಯಾದ
C. ಅಮೇರಿಕಾದ
D. ಚೀನಾದ

IV. ಕಪಾಟಿನಿಂದ ಇವು ಸಾಲು ಸಾಲಾಗಿ ಹರಿದು ಬರುತ್ತಿದ್ದವು.
A. ಇರುವೆಗಳು
B. ಮೀನುಗಳು
C. ಚೇಳುಗಳು
D. ಹಲ್ಲಿಗಳು

V. ಶತ್ರುವನ್ನು ಸದೆಬಡಿಯಲು ಸುಭಾಷ್ ಚಂದ್ರ ಬೋಸರು ಈ ಮಾರ್ಗವನ್ನು ಅನುಸರಿಸಿದರು.
A. ಶಾಂತಿ
B. ಕ್ರಾಂತಿ
C. ಅಹಿಂಸೆ
D. ಹಿಂಸೆ


2. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(1 × 5 = 5)

ಅಂದು 2013 ಜೂನ್ 16 ಮುಸ್ಸಂಜೆಯ ಹೊತ್ತು. ಉತ್ತರಾಖಂಡದ ಕೇದರನಾಥ ದೇವಾಲಯದ ಪರಿಸರದಲ್ಲಿ ಎಂದೆಂದೂ ಕಂಡಿರದ ಭೀಕರ ಮಳೆ. ದೇವಾಲಯದೊಳಗೆ ನೀರು ನುಗ್ಗಿತು. ಅಲ್ಲಿಗೆ ಪ್ರವಾಸಿಗಳಾಗಿ ಬಂದಿದ್ದ ಭಕ್ತ ಸಮೂಹ ದಿಕ್ಕಾಪಾಲಾಗಿ ಓಡಿದರು. ದೆಹಲಿಯಿಂದ ಬಂದಿದ್ದ ಮಹಿಕಾಗುಪ್ತ ಎಂಬ ಸುಮಾರು ಒಂಬತ್ತು ವರ್ಷದ ಬಾಲಕಿ ಕೇದರನಾಥ ದೇವಾಲಯದ ಒಳಗಿದ್ದಳು. ಅವಳ ಅಪ್ಪ, ಅಮ್ಮ ಹಾಗೂ ನಾಲ್ಕು ವರ್ಷದ ತಮ್ಮ ಕಾಣಿಸಲೇ ಇಲ್ಲ. ಮಹಿಕಾ ಗಾಬರಿಯಿಂದ ಬೊಬ್ಬಿರಿದಳು. ಪ್ರವಾಸದ ಗದ್ದಲದಲ್ಲಿ ಅದು ಯಾರಿಗೂ ಕೇಳಿಸಲಿಲ್ಲ. ದೇವಾಲಯದ ಸರಳೊಂದನ್ನು ಹಿಡಿದು ಆಕೆ ನೇತಾಡುತ್ತಿದ್ದಳು.

ಸ್ವಲ್ಪ ಸಮಯದ ನಂತರ ಓರ್ವ ಬಾಲಕನ ಚೀತ್ಕಾರ ಕೇಳಿಸಿತು. ಆಕೆ ಕಿವಿಕೊಟ್ಟು ಆಲಿಸಿದಳು. ಆ ಧ್ವನಿ ಮಹಿಕಾ ತಮ್ಮನದು. ಜಲ ಪ್ರವಾಹವು ಆತನನ್ನು ರಭಸದಿಂದ ಒಳಕ್ಕೆ ಎಸೆಯಿತು. ಆತನ ಕಾಲು ಕಲ್ಲೊಂದಕ್ಕೆ ಜೋರಾಗಿ ಬಡಿಯಿತು. ಮೂಳೆ ಮುರಿದು ಹೋಯಿತು. ಮಹಿಕಾಳಿಗೆ ಈಜು ಬರುತ್ತಿರಲಿಲ್ಲ. ಆದರೂ ಧೈರ್ಯಗೆಡದೆ ಅವನತ್ತ ಕೈ ಬೀಸಿದಳು. ಆತನನ್ನು ಬಲವಾಗಿ ತನ್ನಡೆಗೆ ಸೆಳೆದುಕೊಂಡಳು. ರಭಸವಾಗಿ ಬರುತ್ತಿದ್ದ ನೀರು, ಮಣ್ಣು ಅವನ ಮೂಗು ಮತ್ತು ಬಾಯಿಯ ಒಳಗೆ ನುಗ್ಗುತ್ತಿತ್ತು. ಆದರೂ ಅವಳು ಎದೆಗುಂದಲಿಲ್ಲ. ತನ್ನ ಪುಟ್ಟ ತಮ್ಮನನ್ನು ರಕ್ಷಿಸುವುದೊಂದೇ ಅವಳ ಗುರಿಯಾಗಿತ್ತು. ಸಹಾಯಕ್ಕಾಗಿ ಕಿರುಚಾಡಿದಳು. ಯಾರೂ ಹತ್ತಿರ ಸುಳಿಯಲಿಲ್ಲ. ನೀರು ಮತ್ತೂ ಏರುತ್ತಿತ್ತು.

ರಾತ್ರಿ ಇಡಿ ಮಹಿಕಾ ತನ್ನ ತಮ್ಮನನ್ನು ಅಪ್ಪಿಕೊಂಡು ಸರಳನ್ನು ಹಿಡಿದು ಅಲ್ಲೇ ಕುಳಿತಿದ್ದಳು. ಹೊಟ್ಟೆಗೆ ಕಲುಷಿತ ನೀರೇ ಆಹಾರ. ಮಾರನೆಯ ದಿನಕ್ಕೆ ನೀರಿನ ರಭಸ ತಗ್ಗಿತು. ರಕ್ಷಣಾ ಪಡೆಯವರೊಂದಿಗೆ ಆಕೆಯ ತಾಯಿ ದೇವಾಲಯದೊಳಗೆ ಬಂದರು. ತಮ್ಮನನ್ನು ತಬ್ಬಿಕೊಂಡು ಅನ್ನ ನೀರಿಲ್ಲದೆ ನಿತ್ರಾಣ ಸ್ಥಿತಿಯಲ್ಲಿ ಗೋಡೆ ಒರಗಿ ಕುಳಿತಿದ್ದ ಮಹಿಕಾಳನ್ನು ಕಂಡರು. ಮಕ್ಕಳನ್ನು ಆ ಸ್ಥಿತಿಯಲ್ಲಿ ಕಂಡ ತಾಯಿಗೆ ದುಃಖ ಉಮ್ಮಳಿಸಿ ಬಂತು. ಆಕೆ ಇಬ್ಬರನ್ನು ಗಟ್ಟಿಯಾಗಿ ತಬ್ಬಿಕೊಂಡಳು.

ಮರುದಿನ ಮಹಿಕಾಳ ವೀರ ಕಥೆಯನ್ನು ಪತ್ರಿಕೆ, ದೂರದರ್ಶನ ಮತ್ತು ರೇಡಿಯೋಗಳು ಪ್ರಸಾರ ಮಾಡಿದವು. ಆಕೆಯ ಶೌರ್ಯವನ್ನು ಮನಗಂಡು ರಾಷ್ಟ್ರಪತಿಯವರು 2014 ಜನವರಿ 26ರಂದು **‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’**ಯನ್ನು ನೀಡಿ ಗೌರವಿಸಿದರು. ಇಂದಿನ ಮಕ್ಕಳು ಮುಂದಿನ ಧೀರ ಜನಾಂಗವಾಗಬೇಕೆಂಬ ಸಂದೇಶವನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಸಾರಿದರು. ಇಂತಹ ಸಾಹಸ ಮಾಡಿದ ಮಹಿಕಾಗುಪ್ತಳನ್ನು ಎಷ್ಟು ಕೊಂಡಾಡಿದರೂ ಸಾಲದು.

ಪ್ರಶ್ನೆಗಳು :

I. ಉತ್ತರಾಖಂಡದಲ್ಲಿ ಇರುವಂತಹ ದೇವಾಲಯ
A. ಕೇದರನಾಥ
B. ವಿರೂಪಾಕ್ಷ ದೇವಾಲಯ
C. ವೈದ್ಯನಾಥೇಶ್ವರ
D. ಮರುಳೇಶ್ವರ

II. ಪ್ರವಾಸಿಗಳಾಗಿ ಬಂದಿದ್ದ ಭಕ್ತ ಸಮೂಹ ಈ ಕಾರಣಕ್ಕಾಗಿ ದಿಕ್ಕಾಪಾಲಾಗಿ ಓಡಿದರು.
A. ಸುನಾಮಿಯಿಂದ
B. ಜ್ವಾಲಾಮುಖಿಯಿಂದ
C. ಭೂಕಂಪದಿಂದ
D. ಭೀಕರ ಮಳೆಯಿಂದ

III. ಮಹಿಕಾ ಗುಪ್ತ ಏನನ್ನು ಹಿಡಿದು ನೇತಾಡುತ್ತಿದ್ದಳು?
A. ನೀರು
B. ಗೋಡೆ
C. ಸರಳು
D. ಕಲ್ಲು

IV. ಮಹಿಕಾ ಗುಪ್ತಳಿಗೆ ದೊರೆತ ಪ್ರಶಸ್ತಿ
A. ರಾಷ್ಟ್ರೀಯ ಶೌರ್ಯ ಪ್ರಶಸ್ತಿ
B. ಪದ್ಮಭೂಷಣ
C. ಪದ್ಮವಿಭೂಷಣ
D. ಪದ್ಮಶ್ರೀ

V. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

ಹೇಳಿಕೆ – 1 : ರಕ್ಷಣಾ ಪಡೆಯವರೊಂದಿಗೆ ಆಕೆಯ ತಾಯಿ ದೇವಾಲಯದೊಳಗೆ ಬಂದರು.
ಹೇಳಿಕೆ – 2 : ಇಂದಿನ ಮಕ್ಕಳು ಮುಂದಿನ ಧೀರ ಜನಾಂಗವಾಗಬೇಕೆಂಬ ಸಂದೇಶವನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಸಾರಿದರು.

A. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
B. ಮೊದಲ ಹೇಳಿಕೆ ಸರಿ, ಎರಡನೇ ಹೇಳಿಕೆ ತಪ್ಪು.
C. ಮೊದಲ ಹೇಳಿಕೆ ತಪ್ಪು, ಎರಡನೇ ಹೇಳಿಕೆ ಸರಿ.
D. ಮೇಲಿನ ಎರಡು ಹೇಳಿಕೆಗಳು ಸರಿಯಾಗಿವೆ.

ಉತ್ತರಗಳು

1. ಗದ್ಯಾಂಶ – 1

I. A. ಬಂಗಾಳದ ಕಟಕ್
II. C. ಭಿಕ್ಷುಕಿಗೆ
III. A. ಭಾರತದ
IV. A. ಇರುವೆಗಳು
V. B. ಕ್ರಾಂತಿ


2. ಗದ್ಯಾಂಶ – 2

I. A. ಕೇದರನಾಥ
II. D. ಭೀಕರ ಮಳೆಯಿಂದ
III. C. ಸರಳು
IV. A. ರಾಷ್ಟ್ರೀಯ ಶೌರ್ಯ ಪ್ರಶಸ್ತಿ
V. D. ಮೇಲಿನ ಎರಡು ಹೇಳಿಕೆಗಳು ಸರಿಯಾಗಿವೆ