Telegram Join My Telegram WhatsApp Join My WhatsApp

ಪ್ರಬಂಧಗಳು (ESSAY WRITING)

 ಪ್ರಬಂಧಗಳು (ESSAY WRITING)

1.     ರಾಷ್ಟ್ರೀಯ ಹಬ್ಬಗಳ ಮಹತ್ವ

ಪೀಠಿಕೆ

ದೇಶಪ್ರೇಮ ಹಾಗು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರೀಯ ಹಬ್ಬಗಳು ರಾಷ್ಟ್ರದ ಜನರಲ್ಲಿರುವ ಜಾತಿ, ಮತ, ಭಾಷೆ, ಭೇದಭಾವಗಳನ್ನು ಹೋಗಲಾಡಿಸುತ್ತವೆ. ಭಾರತವು ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳು ಒಟ್ಟಿಗೆ ವಾಸಿಸುವ ವೈವಿಧ್ಯಮಯ ದೇಶವಾಗಿದೆ. ಧರ್ಮ, ಜಾತಿ ಅಥವಾ ಪ್ರದೇಶದ ಭೇದವನ್ನು ಮೀರಿ ಎಲ್ಲರೂ ಒಟ್ಟಾಗಿ ಆಚರಿಸುವುದೇ ರಾಷ್ಟ್ರೀಯ ಹಬ್ಬಗಳಾಗಿವೆ.

ವಿಷಯ ವಿವರಣೆ

ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಎಲ್ಲಾ ಜನರು ಒಟ್ಟಾಗಿ, ಒಗ್ಗಟ್ಟಿನಿಂದ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳಾಗಿವೆ. ವಿವಿಧ ಧರ್ಮಗಳು ಮತ್ತು ಸ್ಥಳಗಳ ಜನರು ತಮ್ಮ ಹೃದಯದಲ್ಲಿ ರಾಷ್ಟ್ರದ ನಿಷ್ಠೆಯೊಂದಿಗೆ ಈ ಹಬ್ಬಗಳನ್ನು ಆಚರಿಸುತ್ತಾರೆ. ಈ ಹಬ್ಬಗಳ ಜೊತೆಗೆ ಇಡೀ ಭಾರತವು ಹೆಮ್ಮೆಯಿಂದ ತಮ್ಮ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಆಚರಿಸುವ ಕೆಲವು ರಾಷ್ಟ್ರೀಯ ಹಬ್ಬಗಳಿವೆ.

ನಮ್ಮ ಭಾರತ ದೇಶದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ, ಅಕ್ಟೋಬರ್ 2ರ ಗಾಂಧೀ ಜಯಂತಿ, ಹಾಗೆಯೇ ನವೆಂಬರ್ 14ರ ಮಕ್ಕಳ ದಿನಾಚರಣೆ, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ, ಅಂಬೇಡ್ಕರ್ ಜಯಂತಿ ಮುಂತಾದ ದಿನಗಳನ್ನು ಕೆಲವು ಮಹಾನೀಯರನ್ನು ಸ್ಮರಿಸುವ ದಿನಗಳಾಗಿ ಆಚರಿಸಲಾಗುತ್ತದೆ. ಇವುಗಳೇ ರಾಷ್ಟ್ರೀಯ ಹಬ್ಬಗಳಾಗಿವೆ.

ರಾಷ್ಟ್ರೀಯ ಹಬ್ಬಗಳ ಮಹತ್ವಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ. ರಾಷ್ಟ್ರೀಯ ಹಬ್ಬಗಳು ಜನರಿಗೆ, ಹೆಚ್ಚಾಗಿ ಯುವಪೀಳಿಗೆಗೆ, ತಮ್ಮ ಮಾತೃಭೂಮಿಯ ಗತಕಾಲದ ಘಟನೆಗಳು ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರನ್ನು ನೆನಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ರಾಷ್ಟ್ರೀಯ ನಾಯಕರ ಕೆಲವು ವಿಚಾರಧಾರೆಗಳನ್ನು ಯುವಜನತೆ ಪ್ರೇರಣೆಯಾಗಿ ತಮ್ಮಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಇಂದು ಎಲ್ಲರಲ್ಲೂ ಪ್ರೇರಕವಾಗಲಿ ಎಂಬ ಉದ್ದೇಶದಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ.

ಉಪಸಂಹಾರ

ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವುದರಿಂದ ಜನರಲ್ಲಿ ರಾಷ್ಟ್ರಾಭಿಮಾನ, ಭಾವೈಕ್ಯತೆ, ರಾಷ್ಟ್ರಭಕ್ತಿ ಮತ್ತು ಸಹಕಾರ ಮನೋಭಾವ ಬೆಳೆಯಲು ಸಹಾಯಕವಾಗುತ್ತದೆ.

2. ಗ್ರಂಥಾಲಯಗಳ ಮಹತ್ವ

ಪೀಠಿಕೆ

ಗ್ರಂಥಾಲಯವು ಶಿಕ್ಷಣ ವ್ಯವಸ್ಥೆಯ ಹೃದಯ ಮತ್ತು ಆತ್ಮವಾಗಿದೆ. ಗ್ರಂಥಾಲಯವು ಜ್ಞಾನವನ್ನು ಹರಡುತ್ತದೆ ಮತ್ತು ಅನೇಕ ಉಪಯೋಗಗಳನ್ನು ಹೊಂದಿದೆ. ಗ್ರಂಥಾಲಯ ಎಂದರೆ ಪುಸ್ತಕಗಳ ಮನೆ. ಆದರೆ ಅದರ ನಿಜವಾದ ಅರ್ಥ ಅಮೂಲ್ಯವಾದ ಜ್ಞಾನದ ಕೇಂದ್ರವಾಗಿದೆ. ಆದ್ದರಿಂದ ಮಾಹಿತಿ ಮತ್ತು ಮಹತ್ವಪೂರ್ಣ ಪುಸ್ತಕಗಳ ಸಂಗ್ರಹವಿರುವ ಸ್ಥಳವನ್ನು ಗ್ರಂಥಾಲಯ ಎಂದು ಕರೆಯಲಾಗುತ್ತದೆ.

ವಿಷಯ ವಿವರಣೆ

ಗ್ರಂಥಾಲಯ ಹೊಸ ಮತ್ತು ಹಳೆಯ ವಿಚಾರಗಳು ಹಾಗೂ ಜ್ಞಾನದ ಅಮೂಲ್ಯ ನಿಧಿಯಾಗಿದೆ. ನನ್ನ ಜೀವನದುದ್ದಕ್ಕೂ ಗ್ರಂಥಾಲಯಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಕಲಿಕೆಗೆ, ಟಿಪ್ಪಣಿಗಳನ್ನು ಮಾಡಲು ಅಥವಾ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲಕರವಾದ ವಾತಾವರಣವನ್ನು ಒದಗಿಸುತ್ತವೆ.

ಗ್ರಂಥಾಲಯದಲ್ಲಿ ಮಕ್ಕಳ ಕಥೆಗಳು, ಕವನಗಳು, ಕ್ರೀಡೆ, ರಾಜಕೀಯ, ಸಾಮಾಜಿಕ, ಆರ್ಥಿಕ, ಕೃಷಿ, ಆರೋಗ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಕಾಣಬಹುದು. ಪುಸ್ತಕಗಳು ಸಾಕ್ಷರತೆ ಮತ್ತು ಜ್ಞಾನವನ್ನು ಉಳಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ನಡೆಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತವೆ.

ಈ 21ನೇ ಶತಮಾನದಲ್ಲಿ ಟೆಲಿವಿಷನ್, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಯುಗದಲ್ಲಿ ಜನರು ಗ್ರಂಥಾಲಯದ ಮಹತ್ವವನ್ನು ಮರೆಯಲಾರಂಭಿಸಿದ್ದಾರೆ. ಆದರೂ ಗ್ರಂಥಾಲಯಗಳ ಆಧುನೀಕರಣದಲ್ಲಿ ಸರ್ಕಾರದ ಕೊಡುಗೆ ಕಂಡುಬರುತ್ತಿದೆ. ಸಂಚಾರಿ ಗ್ರಂಥಾಲಯಗಳು, ಡಿಜಿಟಲ್ ಲೈಬ್ರರಿಗಳು ಮತ್ತು ಅಗತ್ಯ ಸೌಲಭ್ಯಗಳನ್ನು ಅನೇಕ ಸ್ಥಳಗಳಲ್ಲಿ ಒದಗಿಸಲಾಗುತ್ತಿದೆ. ಆಧುನಿಕ ಗ್ರಂಥಾಲಯಗಳು ತಮ್ಮ ಸಂದರ್ಶಕರಿಗೆ ಸಿಡಿಗಳು, ಡಿವಿಡಿಗಳು ಮತ್ತು ಇ–ಪುಸ್ತಕಗಳನ್ನೂ ಸಹ ಲಭ್ಯವಾಗುವಂತೆ ಮಾಡಿವೆ.

ಉಪಸಂಹಾರ

ಒಟ್ಟಾರೆಯಾಗಿ ಗ್ರಂಥಾಲಯದಲ್ಲಿ ಓದುಗರು ಓದಲು ಇಷ್ಟಪಡುತ್ತಾರೆ, ಕಲಿಯುವವರು ಕಲಿಯಲು ಇಷ್ಟಪಡುತ್ತಾರೆ ಮತ್ತು ಶಿಕ್ಷಣತಜ್ಞರು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಗ್ರಂಥಾಲಯವು ಅತ್ಯಂತ ಉಪಯುಕ್ತವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ.