Telegram Join My Telegram WhatsApp Join My WhatsApp

ವ್ಯಾಕರಣ ಮಾಹಿತಿ – 8,9,10 ನೇ ತರಗತಿಗಳ ಅಭ್ಯಾಸ ಗದ್ಯಾಂಶಗಳು 

ವ್ಯಾಕರಣ ಮಾಹಿತಿ – 8,9,10 ನೇ ತರಗತಿಗಳ ಅಭ್ಯಾಸ ಗದ್ಯಾಂಶಗಳು 

(ವಾಚನ ಮತ್ತು ಗ್ರಹಿಕಾ ಕೌಶಲ್ಯ) – 20 ಅಂಕಗಳು

1. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(1 × 5 = 5)

ಸಂಗೀತ ಲೋಕದ ಜಗದ್ಗುರು ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಚಾರಿ ಸಂಗೀತ ಪಾಠಶಾಲೆ ಒಮ್ಮೆ ಗವಿಮಠದಲ್ಲಿ ಕ್ಯಾಂಪ್ (ವಾಸ) ಮಾಡಿತ್ತು. ಅಲ್ಲಿಗೆ ಮಾವನವರೊಂದಿಗೆ ಪುಟ್ಟಯ್ಯನು ಬಂದು ಗುರುಗಳಾದ ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಸ್ವೀಕರಿಸಿ, ಪ್ರೀತಿಯ ಶಿಷ್ಯರೆಲ್ಲರಲ್ಲಿ ಈತನೂ ಒಬ್ಬನಾದನು. ಪುಟ್ಟಯ್ಯನು “ನಾನೊಬ್ಬ ಅಂಧ ಬಾಲಕ, ನನ್ನಿಂದೇನಾಗಲು ಸಾಧ್ಯ? ಜಗತ್ತನ್ನು ನೋಡದ ನನಗೆ ಜಗತ್ತಿಗೆ ಏನು ಕೊಡಲು ಸಾಧ್ಯ? ಇದ್ದಷ್ಟು ದಿನ ಗುರುಸೇವೆ ಮಾಡುತ್ತ ಊಟ ಸಿಕ್ಕಲ್ಲಿ ಹೊಟ್ಟೆಹೊರೆದು, ನೆಲ ಸಿಕ್ಕಲ್ಲಿ ಶಯನಗೈದು ಈ ಬದುಕನ್ನು ಮುಗಿಸಿದರಾಯಿತು” ಎಂಬ ವಿಷಣ್ಣ ಭಾವದಲ್ಲಿ ಇರುತ್ತಿರಲಿಲ್ಲ.

“ಪಂಚಾಕ್ಷರಿ ಗುರುಗಳನ್ನು ಅನುಸರಿಸಬೇಕು. ಅವರ ನುಡಿಯೇ ನನಗೆ ಮಂತ್ರ. ಅವರ ನಡೆಯೇ ನನಗೆ ಆಚಾರವಾಗಬೇಕು” ಎಂದು ನಿರ್ಧರಿಸಿದ ಎಂಟು ವರ್ಷದ ಬಾಲಕ ಪುಟ್ಟಯ್ಯ, ತನ್ನ ಎಲ್ಲ ಸಹಪಾಠಿಗಳಿಗಿಂತ ಬಲುಬೇಗ ಗುರುಗಳು ಹೇಳಿದ್ದನ್ನು ಗ್ರಹಿಸಿ ಕಲಿತುಕೊಂಡನು. ಗುರು-ಶಿಷ್ಯರಿಬ್ಬರೂ ಅಂಧರು. ಅವರ ಬಾಹ್ಯ ಕಣ್ಣು ಅಳಿಸಿದ್ದರೂ, ಅಂತರಂಗದ ಕಣ್ಣು ಅರಳಿತ್ತು. ಶ್ರೇಷ್ಠ ಗುರು ಮಾತ್ರ ಶಿಷ್ಯರ ಮನಸ್ಸನ್ನು ಓದಬಲ್ಲನು; ಅವರ ಅಭಿಲಾಷೆಗೆ ತಕ್ಕಂತ ಜ್ಞಾನ ಕೊಡುವ ಶಕ್ತಿ ಶ್ರೇಷ್ಠ ಗುರುವಿಗೆ ಮಾತ್ರ ಸಿದ್ಧಿಸಿರುತ್ತದೆ. ಪಂಚಾಕ್ಷರಿ ಗವಾಯಿಗಳು ಇಂಥ ಶ್ರೇಷ್ಠ ಗುರುವಾಗಿದ್ದರು.

ಪುಟ್ಟಯ್ಯನ ಸಂಗೀತ ಜ್ಞಾನದೊಂದಿಗೆ ಸಾಹಿತ್ಯ ಜ್ಞಾನವು ಬೆರೆತರೆ ಗಂಗೆ-ಯಮುನೆಯರು ಒಂದಾದಂತೆ ಎಂದು ನಿರ್ಧರಿಸಿ, ಪುಟ್ಟಯ್ಯನು ವಿವಿಧ ಶಾಸ್ತ್ರಗ್ರಂಥಗಳನ್ನು ಕಲಿಯಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟರು. ಅದರ ಪ್ರತಿಫಲವಾಗಿ ಪುಟ್ಟಯ್ಯ ಪಾಣಿನಿಯ ಅಷ್ಟಾಧ್ಯಾಯಿ, ಶರ್ವವರ್ಮನ ಕಾತಂತ್ರ, ಕೇಶಿರಾಜನ ಶಬ್ದಮಣಿ ದರ್ಪಣ, ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ಜೊತೆಗೆ ತರ್ಕಶಾಸ್ತ್ರ, ನ್ಯಾಯಶಾಸ್ತ್ರ, ಶಬ್ದಾನುಶಾಸ್ತ್ರ, ಛಂದಶಾಸ್ತ್ರ ಹಾಗೂ ಕನ್ನಡ ವ್ಯಾಕರಣವನ್ನು ಶಾಸ್ತ್ರಬದ್ಧವಾಗಿ ಕಲಿತರು. ಕೇವಲ ಕಲಿಯಲಿಲ್ಲ; ಅವುಗಳಲ್ಲಿ ನಿಷ್ಣಾತರಾದರು.

ಕಣ್ಣುಕಾಣದ ಪುಟ್ಟರಾಜರು ಸದಾಕಾಲ ಬೇರೆಯವರ ಸಹಾಯ ಪಡೆದೇ ಓದಿಸುವ ಹಾಗೂ ಬರೆಸುವ ಕೆಲಸ ಮಾಡಬೇಕಾಗಿತ್ತು. ಇದರಿಂದ ಮುಕ್ತರಾಗಲು ಪುಟ್ಟರಾಜರು ಬ್ರೈಲ್ ಲಿಪಿ ಕಲಿತು, ಅದರಲ್ಲಿ ಪಾರಂಗತರಾದರು.

ಪ್ರಶ್ನೆಗಳು :

I. ಸಂಗೀತ ಲೋಕದ ಜಗದ್ಗುರು ________
A. ಪಂಡಿತ ಕಿಶನ್ ಮಹಾರಾಜ್
B. ಪಂಡಿತ ಪಂಚಾಕ್ಷರಿ ಗವಾಯಿಗಳು
C. ಪಂಡಿತ ರವಿ ಶಂಕರ್
D. ಪಂಡಿತ ಭೀಮ್ ಸೇನ್ ಜೋಷಿ

II. ಪುಟ್ಟಯ್ಯನು ತನ್ನ ______ ಗುರುಗಳ ಶಿಷ್ಯತ್ವ ಸ್ವೀಕರಿಸಲು ಬಂದನು.
A. ತಾಯಿಯೊಂದಿಗೆ
B. ಮಾವನೊಂದಿಗೆ
C. ಅಣ್ಣನೊಂದಿಗೆ
D. ತಂದೆಯೊಂದಿಗೆ

III. ಪುಟ್ಟಯ್ಯನವರು ಸಂಗೀತ ಕಲಿಯಲು ಬಂದಾಗ ______ ವರ್ಷದ ಬಾಲಕರಾಗಿದ್ದರು.
A. ನಾಲ್ಕು
B. ಆರು
C. ಐದು
D. ಎಂಟು

IV. ಪುಟ್ಟಯ್ಯನವರು ______ ಗುರುಗಳನ್ನು ಅನುಸರಿಸಿದರು.
A. ಪಂಚಾಕ್ಷರಿ
B. ಕೃಷ್ಣರಾಮ್ ಚೌದರಿ
C. ಮಣಿ ಅಯ್ಯರ್
D. ಶಿವಕುಮಾರ್ ಶರ್ಮ

V. ಪುಟ್ಟರಾಜರು ______ ಕಲಿತು, ಅದರಲ್ಲಿ ಪಾರಂಗತರಾದರು.
A. ಬ್ರೈಲ್ ಲಿಪಿ
B. ಗಣಕಯಂತ್ರ
C. ಬೆರಳಚ್ಚು
D. ನೃತ್ಯ


2. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

(1 × 5 = 5)

ನಿಸರ್ಗದ ಜೊತೆ ಸಾಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ಧಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶ ಮಾಡುತ್ತಿರುವುದರಿಂದ ವನ್ಯಜೀವಿಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ತಾನು ಸಕಲ ಜೀವ ಸಂಕುಲದಂತೆ ಒಂದು ಜೀವಿ ಎನ್ನುವುದನ್ನು ಮರೆತು ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು ನಾಶಮಾಡಲು ಹೊರಟಿದ್ದಾನೆ.

ನೈಸರ್ಗಿಕ ಪ್ರದೇಶಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಉಳಿಸಬೇಕಾದ ಮನುಷ್ಯನೇ ಇಂದು ಅಧಿಕಾರ ಮತ್ತು ಸಂಪತ್ತಿನ ಆಸೆ ಆಮಿಷಗಳಿಗೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ. ಯಾವುದು ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ, ಯಾವುದು ಪೂರಕವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವಿಲ್ಲದೆ ನಾವು ವಿಜ್ಞಾನ ಮತ್ತು ತಂತ್ರಜ್ಞಾನಗಳ ದಾಸರಾಗಿದ್ದೇವೆ.

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದೆಸೆಯಿಂದ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಹೆಚ್ಚಿನ ಮನುಷ್ಯರು ಪರಿಸರಕ್ಕೆ ಮಾರಕವಾಗುವಂತಹ ಜೀವನ ಕ್ರಮವನ್ನು ಅನುಸರಿಸಿಕೊಂಡು ಪರಿಸರದಲ್ಲಿ ನಾವು ಒಂದು ಜೀವಿ ಸಂಕುಲ ಎನ್ನುವುದನ್ನು ಮರೆತುಬಿಟ್ಟಿದ್ದೇವೆ.

ಇತರ ಜೀವಿಗಳಂತೆ ಮನುಷ್ಯ ಜೀವಿಯೂ ಪ್ರಕೃತಿಯ ನಿಯಮಗಳನ್ನು ಪಾಲಿಸಿದ್ದರೆ ಇಂದು ಬರಗಾಲ, ಹವಾಮಾನ ವೈಪರಿತ್ಯ, ಪರಿಸರ ಮಾಲಿನ್ಯ ಇದಾವ ಸಮಸ್ಯೆಗಳೂ ಬರುತ್ತಿರಲಿಲ್ಲ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬರದಲ್ಲಿ ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳು, ಕಟ್ಟಡಗಳು ಹಾಗೂ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳಿಂದಾಗಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು ವಾತಾವರಣ ಕಲುಷಿತವಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ: ದೆಹಲಿ ನಮ್ಮ ಕಣ್ಣಮುಂದೆ ಇದೆ. ಹೀಗೆ ಪರಿಸರದಲ್ಲಿ ಅಸಮತೋಲನದಿಂದ ಶುದ್ಧನೀರು ಮತ್ತು ಗಾಳಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆರೆಕಟ್ಟೆಗಳು ಬತ್ತಿಹೋಗುತ್ತಿವೆ. ಒಂದು ಹನಿ ನೀರಿಗಾಗಿ ಪರದಾಡುವಂತಾಗಿದೆ.

ಎಂದರೆ ಅದಕ್ಕೆ ಹೊಣೆ ಯಾರು? ನಾವೇ ಅಲ್ಲವೇ! ಈ ಬಗ್ಗೆ ನಾವು ಚಿಂತಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ.

ಪ್ರಶ್ನೆಗಳು :

I. ನಾವು ವಿಜ್ಞಾನ ಮತ್ತು ತಂತ್ರಜ್ಞಾನಗಳ ದಾಸರಾಗಲು ಕಾರಣ.
A. ಪರಿಸರ ಜ್ಞಾನದ ಕೊರತೆ
B. ಸಮಾಜ ವಿಜ್ಞಾನದ ಕೊರತೆ
C. ಸಾಹಿತ್ಯ ಜ್ಞಾನದ ಕೊರತೆ
D. ಸಾಮಾನ್ಯ ಜ್ಞಾನದ ಕೊರತೆ

II. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳಿಂದಾಗಿ ಯಂತ್ರಗಳ ಬಳಕೆ ಹೆಚ್ಚಾಗಿ ______ ಕಲುಷಿತವಾಗುತ್ತದೆ.
A. ಅಭಿವೃದ್ಧಿ
B. ಮನಸ್ಸು
C. ರಸ್ತೆಯು
D. ವಾತಾವರಣ

III. ಬರಗಾಲ, ಹವಾಮಾನ ವೈಪರಿತ್ಯ, ಪರಿಸರ ಮಾಲಿನ್ಯ ಈ ಸಮಸ್ಯೆಗಳು ದೂರವಾಗಲು ನಾವು ಮಾಡಬೇಕಾದುದೇನು?
A. ಪ್ರಕೃತಿ ನಿಯಮಗಳನ್ನು ಪಾಲಿಸಬೇಕು
B. ಸರಕಾರದ ನಿಯಮ ಪಾಲಿಸಬೇಕು
C. ಕಾನೂನು ನಿಯಮ ಪಾಲಿಸಬೇಕು
D. ವಿಜ್ಞಾನದಲ್ಲಿ ಪ್ರಗತಿ ಸಾಧಿಸಬೇಕು

IV. ಪರಿಸರ ನಾಶವಾಗಲು ಕಾರಣಗಳು :
A. ಸ್ವಾರ್ಥ 
B. ಅಧಿಕಾರ – ಸಂಪತ್ತಿನ ಆಸೆ
C. ಅಭಿವೃದ್ಧಿ
D. ಹೊಣೆಗಾರಿಕೆ – ಅಧಿಕಾರ

A. A ಮತ್ತು B ಸರಿ
B. A ಮತ್ತು C ಸರಿ
C. B ಮತ್ತು D ಸರಿ
D. C ಮಾತ್ರ ಸರಿ

V. ಅಭಿವೃದ್ಧಿಯ ಮಾನದಂಡದಿಂದ ಮನುಷ್ಯ ______
A. ಪರಿಸರವನ್ನು ನಾಶಮಾಡಿದ್ದಾನೆ
B. ಶುದ್ಧ ಗಾಳಿ ನೀರು ಸಿಗದಂತೆ ಮಾಡಿದ್ದಾನೆ
C. ಭವಿಷ್ಯತ್ತಿನ ವಿಚಾರದಲ್ಲಿ ಕುರುಡನಾಗಿದ್ದಾನೆ
D. ಮೇಲಿನ ಎಲ್ಲವೂ

ಉತ್ತರಗಳು

1. ಗದ್ಯಾಂಶ – ಉತ್ತರಗಳು

  1. ಸಂಗೀತ ಲೋಕದ ಜಗದ್ಗುರು
    ಉತ್ತರ: B. ಪಂಡಿತ ಪಂಚಾಕ್ಷರಿ ಗವಾಯಿಗಳು

  2. ಪುಟ್ಟಯ್ಯನು ತನ್ನ ______ ಗುರುಗಳ ಶಿಷ್ಯತ್ವ ಸ್ವೀಕರಿಸಲು ಬಂದನು.
    ಉತ್ತರ: B. ಮಾವನೊಂದಿಗೆ

  3. ಪುಟ್ಟಯ್ಯನವರು ಸಂಗೀತ ಕಲಿಯಲು ಬಂದಾಗ ______ ವರ್ಷದ ಬಾಲಕರಾಗಿದ್ದರು.
    ಉತ್ತರ: D. ಎಂಟು

  4. ಪುಟ್ಟಯ್ಯನವರು ______ ಗುರುಗಳನ್ನು ಅನುಸರಿಸಿದರು.
    ಉತ್ತರ: A. ಪಂಚಾಕ್ಷರಿ

  5. ಪುಟ್ಟರಾಜರು ______ ಕಲಿತು, ಅದರಲ್ಲಿ ಪಾರಂಗತರಾದರು.
    ಉತ್ತರ: A. ಬ್ರೈಲ್ ಲಿಪಿ


2. ಗದ್ಯಾಂಶ – ಉತ್ತರಗಳು

  1. ನಾವು ವಿಜ್ಞಾನ ಮತ್ತು ತಂತ್ರಜ್ಞಾನಗಳ ದಾಸರಾಗಲು ಕಾರಣ
    ಉತ್ತರ: A. ಪರಿಸರ ಜ್ಞಾನದ ಕೊರತೆ

  2. ಯಂತ್ರಗಳ ಬಳಕೆ ಹೆಚ್ಚಾಗಿ ______ ಕಲುಷಿತವಾಗುತ್ತದೆ.
    ಉತ್ತರ: D. ವಾತಾವರಣ

  3. ಈ ಸಮಸ್ಯೆಗಳು ದೂರವಾಗಲು ನಾವು ಮಾಡಬೇಕಾದುದು
    ಉತ್ತರ: A. ಪ್ರಕೃತಿ ನಿಯಮಗಳನ್ನು ಪಾಲಿಸಬೇಕು

  4. ಪರಿಸರ ನಾಶವಾಗಲು ಕಾರಣಗಳು
    ಉತ್ತರ: B. A ಮತ್ತು C ಸರಿ

  5. ಅಭಿವೃದ್ಧಿಯ ಮಾನದಂಡದಿಂದ ಮನುಷ್ಯ ______
    ಉತ್ತರ: D. ಮೇಲಿನ ಎಲ್ಲವೂ