Telegram Join My Telegram WhatsApp Join My WhatsApp

ಗುಬ್ಬಚ್ಚಿಗಳ ನೆನಪುಗಳ ನಡುವೆ

ಗುಬ್ಬಚ್ಚಿಗಳ ನೆನಪುಗಳ ನಡುವೆ

ನಮ್ಮ ಗುಬ್ಬಚ್ಚಿಗಳ ದಿನ… 🐦

ಮಾರ್ಚ್-20  ದಿನ ಬಂದಾಗಲೆಲ್ಲ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಖಾಲಿತನ ಮೂಡುತ್ತದೆ. ಒಮ್ಮೆ ನಮ್ಮ ಬದುಕಿನ ಭಾಗವಾಗಿದ್ದ, ಪ್ರತಿದಿನ ಕಣ್ಣಿಗೆ ಬೀಳುತ್ತಿದ್ದ ಆ ಪುಟ್ಟ ಗುಬ್ಬಚ್ಚಿಗಳು ಈಗ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಆದರೂ ಅವುಗಳ ನೆನಪುಗಳು ಮಾತ್ರ ನಮ್ಮೊಳಗೆ ಜೀವಂತವಾಗಿಯೇ ಇವೆ.

ನಾವು ಚಿಕ್ಕವರಿದ್ದಾಗ ಬೆಳಗ್ಗೆ ಎದ್ದ ಕೂಡಲೇ ಕೇಳಿಸುತ್ತಿದ್ದದ್ದು ಗುಬ್ಬಚ್ಚಿಗಳ ಚಿಲಿಪಿಲಿ. ಮನೆಗಳ ತೊಲೆಗಳು, ಕಿಟಕಿಯ ಅಂಚುಗಳು, ಗಿಡಗಳ ಕೊಂಬೆಗಳು—ಎಲ್ಲೆಲ್ಲೂ ಅವುಗಳ ಓಡಾಟ. ನಮ್ಮ ಹೆಂಚಿನ ಮನೆಗಳ ಮೇಲ್ಛಾವಣಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಆ ಗುಬ್ಬಚ್ಚಿಗಳನ್ನು ನೋಡಿದರೆ ಮನಸ್ಸೇ ಹರ್ಷದಿಂದ ತುಂಬುತ್ತಿತ್ತು.

ಅಕ್ಕಪಕ್ಕದ ಸೀಬೆಮರ, ಬಾವಿಯ ಸುತ್ತಲಿನ ಗಿಡಗಳು, ರಸ್ತೆಯ ಬದಿಯ ನೀರಿನ ಪುಟ್ಟ ಗುಂಡಿಗಳು—ಇವೆಲ್ಲವೂ ಅವುಗಳ ಲೋಕವಾಗಿತ್ತು. ಆ ನೀರಿನಲ್ಲಿ ಸ್ನಾನ ಮಾಡುವುದು, ಒಣಗಿಕೊಳ್ಳುವುದು, ಮತ್ತೆ ಹಾರುವುದು—ಇವೆಲ್ಲವೂ ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದವು.

ನಾವು ಮನೆಯಲ್ಲಿ ಮೆತ್ತಗೆ ಕದ್ದುಕೊಂಡು ಸ್ವಲ್ಪ ಕಾಳುಗಳನ್ನು ಹೊರಗೆ ಹಾಕಿದರೆ, ಅವು ಎಲ್ಲಿಂದಲೋ ಓಡಿಬಂದು ಚುಟುಕು ಚುಟುಕು ಹೆಕ್ಕಿ ಹೋಗುತ್ತವೆ. ಆ ಚಿಕ್ಕ ಘಟನೆಗಳಲ್ಲಿ ಎಷ್ಟು ಸಂತೋಷ ಇತ್ತು! ಅವು ಕೇವಲ ಪಕ್ಷಿಗಳಲ್ಲ; ನಮ್ಮ ದಿನನಿತ್ಯದ ಬದುಕಿನ ಒಂದು ಭಾಗವಾಗಿದ್ದವು.

ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಗುಬ್ಬಚ್ಚಿಗಳನ್ನು ನೋಡಲು ಪಾರ್ಕ್‌ಗಳಿಗೆ ಹೋಗಬೇಕಾದ ಪರಿಸ್ಥಿತಿ. ನಮ್ಮ ಮನೆಗಳ ಒಳಗೆ ಅವು ಬರಲು ಅವಕಾಶವೇ ಇಲ್ಲ. ನಾವು ಕಟ್ಟಿಕೊಂಡಿರುವ ಕಾಂಕ್ರೀಟ್ ಮನೆಗಳು, ಮುಚ್ಚಿದ ಕಿಟಕಿಗಳು, ಕಬ್ಬಿಣದ ಜಾಲಗಳು—ಇವೆಲ್ಲವು ಅವುಗಳಿಗೆ ಅಡ್ಡಿಯಾಗಿದೆ.

“ಪಕ್ಷಿಗಳು ಗಲೀಜು ಮಾಡುತ್ತವೆ” ಎಂಬ ಕಾರಣಕ್ಕೆ ನಾವು ಅವುಗಳನ್ನು ದೂರ ತಳ್ಳುತ್ತಿದ್ದೇವೆ. ಆದರೆ ಒಮ್ಮೆ ಯೋಚಿಸಿದ್ದೇವೆಯಾ—ಒಮ್ಮೆ ನಮ್ಮ ಜೊತೆ ಇದ್ದ ಜೀವಿಗಳಿಗೆ ನಾವು ಇಷ್ಟು ದೂರ ಮಾಡಿಬಿಟ್ಟಿದ್ದೇವೆ ಎಂದು?

ಇನ್ನೊಂದು ದೊಡ್ಡ ಬದಲಾವಣೆ ನಮ್ಮ ಜೀವನದಲ್ಲಿ ಬಂದಿದ್ದು ಮೊಬೈಲ್‌ಗಳಿಂದ. ನಾವು ದಿನವಿಡೀ ಅದರಲ್ಲಿ ಮುಳುಗಿದ್ದೇವೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರಕೃತಿಯ ಸೌಂದರ್ಯವನ್ನು ನಾವು ಗಮನಿಸುವುದೇ ಇಲ್ಲ. ನಮ್ಮ ಗದ್ದಲ, ನಮ್ಮ ವ್ಯಸ್ತ ಜೀವನ—ಇವೆಲ್ಲವು ಗುಬ್ಬಚ್ಚಿಗಳಂತಹ ಚಿಕ್ಕ ಜೀವಿಗಳಿಗೆ ಅಸಹ್ಯವಾಗಿರಬಹುದು.

ಒಮ್ಮೆ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ—
ನಾವು ಕೇಳುವುದೇ ಇಲ್ಲದಾಗ, ಅವು ಹಾಡುವುದೇಕೆ?

ಇಂದಿಗೂ ಕೆಲವೊಮ್ಮೆ ಮನೆಯ ಪಕ್ಕದ ಪೊದೆಗಳಲ್ಲಿ ಒಂದೆರಡು ಗುಬ್ಬಚ್ಚಿಗಳು ಕಾಣಿಸುತ್ತವೆ. ಆದರೆ ಅವು ಕೂಡ ನಮ್ಮತ್ತ ನೋಡುವುದೇ ಇಲ್ಲ. ಬಂದು ಕ್ಷಣದಲ್ಲೇ ಹಾರಿಹೋಗುತ್ತವೆ. ಅವುಗಳಲ್ಲಿ ಒಂದು ಭಯ ಇದೆ, ಒಂದು ದೂರವಿರುವ ಮನಸ್ಥಿತಿ ಇದೆ.

ಚಿಕ್ಕವಯಸ್ಸಿನಲ್ಲಿ ಅನಿಸುತ್ತಿತ್ತು—ಗುಬ್ಬಚ್ಚಿಯಂತೆ ಬದುಕಬೇಕು ಎಂದು. ಯಾವುದೇ ಚಿಂತೆಯಿಲ್ಲದೆ, ಯಾವುದೇ ಒತ್ತಡವಿಲ್ಲದೆ, ದಿನವಿಡೀ ಕುಣಿದು ಕುಪ್ಪಳಿಸುತ್ತಾ ಸಂತೋಷದಿಂದ ಬದುಕುವ ಜೀವನ.

ಆದರೆ ಈಗ ಅರ್ಥವಾಗುತ್ತಿದೆ—ಅದು ಅಷ್ಟೇ ಸುಲಭವಲ್ಲ. ಆದರೂ, ಅವು ನಮ್ಮಿಗೆ ಕಲಿಸಿದ ಪಾಠ ತುಂಬಾ ಸರಳವಾದದ್ದು—
ಸರಳವಾಗಿ ಬದುಕು,
ಇರುವುದರಲ್ಲಿ ಸಂತೋಷಪಡು,
ಯಾರಿಗೂ ತೊಂದರೆ ಕೊಡದೆ ನಿನ್ನ ಜೀವನ ನಡೆಸು.

ಇಂದು “ಗುಬ್ಬಚ್ಚಿ ಚಿಲಿಪಿಲಿ ಕೇಳಿಸುತ್ತಿಲ್ಲ” ಎಂಬುದು ನಿಜವಾಗಿದೆ. ನಗರೀಕರಣ ಹೆಚ್ಚಾಗಿದೆ. ಹಳೆಯ ಮನೆಗಳು ಕಣ್ಮರೆಯಾಗಿವೆ. ಗಿಡಮರಗಳು ಕಡಿಮೆಯಾಗಿವೆ. ಅವುಗಳಿಗೆ ಗೂಡು ಕಟ್ಟಲು ಜಾಗವೇ ಇಲ್ಲ.

ಕೃಷಿಯಲ್ಲಿ ಹೆಚ್ಚುತ್ತಿರುವ ಕೀಟನಾಶಕಗಳ ಬಳಕೆ, ಪ್ಲಾಸ್ಟಿಕ್, ಮಾಲಿನ್ಯ—ಇವೆಲ್ಲವೂ ಅವುಗಳ ಆಹಾರ ಸರಪಳಿಯನ್ನು ಹಾಳು ಮಾಡಿವೆ. ಮೊಬೈಲ್ ಟವರ್‌ಗಳ ಪರಿಣಾಮದ ಬಗ್ಗೆ ಕೂಡ ಹಲವರು ಮಾತಾಡುತ್ತಾರೆ. ಒಟ್ಟಾರೆ, ಪರಿಸ್ಥಿತಿ ಅವುಗಳಿಗೆ ಅನುಕೂಲಕರವಾಗಿಲ್ಲ.

ಒಮ್ಮೆ ನಮ್ಮ ಮನೆಗಳ ಅಂಗಣದಲ್ಲಿ ಓಡಾಡುತ್ತಿದ್ದ ಗುಬ್ಬಚ್ಚಿಗಳು, ಇಂದಿನ ಮಕ್ಕಳಿಗೆ ಚಿತ್ರಗಳಲ್ಲಿ ಮಾತ್ರ ಕಾಣುವ ಸ್ಥಿತಿಗೆ ಬಂದುಬಿಟ್ಟಿವೆ. ಇದು ಒಂದು ನೋವು ತಂದ ಸಂಗತಿ.

ಆದ್ದರಿಂದಲೇ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನವಲ್ಲ—ನಮಗೆ ಒಂದು ನೆನಪು, ಒಂದು ಎಚ್ಚರಿಕೆ.

ಗುಬ್ಬಚ್ಚಿಗಳು ಚಿಕ್ಕದಾದರೂ, ಅವುಗಳ ಜೀವನ ದೊಡ್ಡ ಪಾಠ. ತಮ್ಮ ಕುಟುಂಬವನ್ನು ಕಾಪಾಡುವುದು, ಚಿಕ್ಕ ಚಿಕ್ಕ ವಸ್ತುಗಳನ್ನು ಸೇರಿಸಿ ಗೂಡು ಕಟ್ಟುವುದು, ತಮ್ಮ ಮಕ್ಕಳಿಗೆ ಆಹಾರ ತಂದು ಕೊಡುವುದು—ಇವೆಲ್ಲವೂ ನಮ್ಮಿಗೆ ಜೀವನದ ಅರ್ಥವನ್ನು ಕಲಿಸುತ್ತವೆ.

ಆದರೆ ನಾವು ಏನು ಮಾಡುತ್ತಿದ್ದೇವೆ? ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಮರೆತಿದ್ದೇವೆ. ನಮ್ಮ ಸೌಕರ್ಯಕ್ಕಾಗಿ ಇತರ ಜೀವಿಗಳ ಬದುಕನ್ನು ಕಷ್ಟಪಡಿಸುತ್ತಿದ್ದೇವೆ.

ಇದನ್ನು ಬದಲಾಯಿಸಬೇಕಾಗಿದೆ.
ನಮ್ಮ ಮನೆಗಳ ಬಳಿ ನೀರು ಇಡಬಹುದು.
ಸ್ವಲ್ಪ ಕಾಳುಗಳನ್ನು ಹಾಕಬಹುದು.
ಚಿಕ್ಕ ಗಿಡಗಳನ್ನು ಬೆಳೆಸಬಹುದು.

ಇವು ಸಣ್ಣ ಕೆಲಸಗಳಾದರೂ, ಅವುಗಳಿಗೆ ದೊಡ್ಡ ಸಹಾಯವಾಗಬಹುದು.

ಗುಬ್ಬಚ್ಚಿಗಳೇ…
ನೀವು ಮತ್ತೆ ನಮ್ಮ ಬದುಕಿಗೆ ಬರಬೇಕು.
ನಿಮ್ಮ ಚಿಲಿಪಿಲಿ ಮತ್ತೆ ಕೇಳಿಸಬೇಕು.

ನಾವು ನಿಮ್ಮನ್ನು ತುಂಬಾ ಮಿಸ್ ಮಾಡುತ್ತಿದ್ದೇವೆ.
ನಿಮ್ಮ ಸರಳ ಜೀವನವೇ ನಮ್ಮ ಪ್ರೇರಣೆಯಾಗಲಿ.

ಮತ್ತೆ ಒಂದು ದಿನ,
ನಮ್ಮ ಮನೆಯಂಗಳದಲ್ಲಿ ನೀವು ಕುಣಿಯುವ ದಿನ ಬರಲಿ… 🐦💛

ಕೃಪೆ : ಕನ್ಯಾಕುಮಾರಿ, ಸಂತ ಫಿಲೋಮೆನಾಸ್ ಶಾಲೆ, ಹಾಸನ.